ಸಂಗನಕಲ್ಲು
 	ಭಾರತದ ಕರ್ನಾಟಕ ರಾಜ್ಯದ ಬಳ್ಳಾರಿ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಕರ್ನಾಟಕದ ಪ್ರಮುಖ ಪ್ರಾಗೈತಿಹಾಸಿಕ ನೆಲೆಗಳ ಲ್ಲೊಂದು. ಬಳ್ಳಾರಿಗೆ 3 ಕಿಮೀ ದೂರದಲ್ಲಿದೆ.  ಕರ್ನಾಟಕದ ನವಶಿಲಾ-ತಾಮ್ರಶಿಲಾ ಯುಗದ ಸಂಸ್ಕøತಿಯನ್ನು ಚಿತ್ರಿಸುವಲ್ಲಿ ಈ ನೆಲೆಯ ಪಾತ್ರ ಗಣನೀಯವಾದುದು. ರಾಬರ್ಟ್ ಬ್ರೂಸ್‍ಫುಟ್ ಅವರು ಈ ನಿವೇಶನದ ಮಹತ್ತ್ವವನ್ನು ಸೂಚಿಸಿದ್ದರು. 1948ರಲ್ಲಿ ಬಿ. ಸುಬ್ಬರಾವ್ ಅವರು ಇಲ್ಲಿ ಸಣ್ಣಪ್ರಮಾಣದ ಉತ್ಖನನ ನಡೆಸಿದ್ದರು. ಅನಂತರ 1964-65ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿನವರು (ಜûಡ್. ಡಿ. ಅನ್ಸಾರಿ ಮತ್ತು ಎಂ. ಎಸ್. ನಾಗರಾಜರಾವ್) ಇಲ್ಲಿ ಇನ್ನೂ ವಿವರಪೂರ್ಣವಾಗಿ ಭೂ ಅಗೆತ ಮಾಡಿದರು.  ಇವುಗಳಿಂದಾಗಿ ಪೂರ್ವ ಮೆಸೋಲಿಥಿಕ್, ಮೆಸೋಲಿಥಿಕ್, ನವಶಿಲಾಯುಗ ಮತ್ತು ಬೃಹತ್ ಶಿಲಾಯುಗ-ಎಂಬುದಾಗಿ ನಾಲ್ಕು ಮುಖ್ಯ ಪ್ರಾಗೈತಿಹಾಸಿಕ ಸಾಂಸ್ಕøತಿಕ ಹಂತಗಳನ್ನು ಇಲ್ಲಿ ಗುರುತಿಸಲಾ ಗಿದೆ. ಇಲ್ಲಿಯೂ ಪ್ರಾದೇಶಿಕ ಅಧ್ಯಯನ, ಭೂಗೋಳ, ನೆಲ, ಹವಾಮಾನ ಇತ್ಯಾದಿಗಳನ್ನು ಪ್ರಾಕ್ತನ ಶಾಸ್ತ್ರಜ್ಞರು ಅಭ್ಯಸಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ಕೈಕೊಂಡ ಭೂ ಅಗೆತದಿಂದ ಅನೇಕ ವಸ್ತುವಿಶೇಷಗಳನ್ನೂ ಹೊರತೆಗೆದಿದ್ದಾರೆ. ಹಗರಿ ನದಿ ಹರಿಯುವ ಪ್ರದೇಶದಲ್ಲಿರುವ ಈ ಸ್ಥಳದಲ್ಲಿದೊರೆತ ಕಲ್ಲಿನ ಆಯುಧೋಪಕರಣ ಗಳನ್ನು ಬೆಸಾಲ್ಟ್, ಡಯೊರೈಟ್ ಮುಂತಾದ ಟ್ರಾಪ್‍ಶಿಲೆಗಳಿಂದ ಮಾಡಲಾಗಿದೆ.  ಹರಿತವಾದ ಅಂಚುಳ್ಳ ಆಯುಧ, ಮೊನೆಯುಳ್ಳ ಉಪಕರಣ, ಕುಟ್ಟುವ, ಅರೆಯುವ ಸಾಧನಗಳು, ಸುತ್ತಿಗೆ ಕಲ್ಲುಗಳು ಮುಂತಾದವನ್ನು ಇಲ್ಲಿ ಮುಖ್ಯವಾಗಿ ಹೆಸರಿಸಬಹುದು.  ನಯಗೊಳಿಸಿದ ಕಲ್ಲಿನ ಕೊಡಲಿಗಳ ಜೊತೆ ಜೊತೆಗೆ ಕೂರಲಗಿನ ಫಲಕಗಳು (ಸೂಕ್ಷ್ಮಶಿಲಾಯುಧಗಳು) ದೊರಕಿವೆ. ಇವುಗಳಿಂದಾಗಿ ಸೂಕ್ಷ್ಮಶಿಲಾ ಯುಗೀನ ಸಂಸ್ಕøತಿಯೊಟ್ಟಿಗೆ ನವಶಿಲಾಯುಗೀನ ಸಂಸ್ಕøತಿ ಹೇಗೆ ವಿಲೀನವಾಗಿರಬಹುದೆಂದು ಊಹಿಸಲು ಸಾಧ್ಯ. ಇಲ್ಲಿ ದೊರೆತ ಆಯುಧೋಪಕರಣಗಳ ವೈವಿಧ್ಯ ಮತ್ತು ಪ್ರಮಾಣಗಳನ್ನು ಆಧರಿಸಿ ಇದನ್ನು ಒಂದು ಫ್ಯಾಕ್ಟರಿ ಸೈಟ ಎಂದೇ ಬಣ್ಣಿಸಲಾಗಿದೆ. ಇಲ್ಲಿ ದೊರೆತ ಮಡಕೆ-ಕುಡಿಕೆಗಳನ್ನು ಜೇಡಿಮಣ್ಣಿನಿಂದ ಕೈಯಿಂದಲೇ  ಮಾಡಲಾಗಿದೆ. ಅವನ್ನು ಸುಡುವುದಕ್ಕಿಂತ ಮೊದಲು ನುಣುಪಾದ ಕಲ್ಲಿನಿಂದ ನಯಗೊಳಿಸ ಲಾಗಿದೆ. ಮಾಸಿದ ಬೂದುಬಣ್ಣದ ಮಡಕೆ, ಬಿಳಿಬಣ್ಣದಿಂದ ಅಲಂಕರಿಸಿದ ಕಪ್ಪು-ಕೆಂಪು ಮಡಕೆಗಳು ಇಲ್ಲಿ ಗಮನಾರ್ಹ. ಮೂಳೆಗಳಿಂದ ಮಾಡಿದ ಮೊನಚಾದ ದಬ್ಬಳಗಳೂ ಇಲ್ಲಿ ಸಿಕ್ಕಿವೆ. ಸುಣ್ಣಕಲ್ಲಿನ ಹಾಗೂ ಕಾರ್ನಿಲಿಯನ್ ಮಣಿಗಳಲ್ಲದೆ, ಕುದುರೆಯದೆಂದು ಹೇಳಲಾದ ಮೂಳೆಗಳು ದೊರೆತಿವೆ. ವೃಷಭ, ಪಕ್ಷಿ ಮುಂತಾದವುಗಳ ಮಣ್ಣಿನ ಗೊಂಬೆಗಳೂ ಸಿಕ್ಕಿವೆ. ಇವಲ್ಲದೆ ಆ ಕಾಲದ ಜನ ಮನೆಗಳನ್ನು ಹೇಗೆ ವೃತ್ತಾಕಾರದಲ್ಲಿ ನಿರ್ಮಿಸುತ್ತಿದ್ದರೆಂದು ತಿಳಿಯಲು ಸಹಾಯಕವಾದ ಅವಶೇಷಗಳೂ ದೊರೆತಿವೆ. ಅಲ್ಲಿದ್ದ ಜನರ ಶವಸಂಸ್ಕಾರ ಪದ್ಧತಿಯನ್ನು ತಿಳಿಸಲು ಸಹಾಯಕವಾದ ಮಡಕೆ, ಎಲುಬು ಮುಂತಾದವೂ ದೊರೆತಿವೆ.  ಅಲ್ಲದೆ ನವಶಿಲಾಯುಗದ ಅನಂತರ ಒಂದು ಬೃಹತ್ ಶಿಲಾಯುಗದ ಆರಂಭ ಕಾಲದ ಸಂಸ್ಕøತಿಯ ಚಿತ್ರಣ ಕೂಡ ಇಲ್ಲಿ ನಡೆಸಿದ ಉತ್ಖನನಗಳಿಂದ ಸಾಧ್ಯವಾಗಿದೆ. ಮೇಲ್ಪದರಿನಲ್ಲಿ ದೊರೆತ ಬೃಹತ್‍ಶಿಲಾಯುಗೀನ ಅವಶೇಷಗಳಲ್ಲಿ ಕೆಂಪುಕಪ್ಪು ಹಾಗೂ ಕಪ್ಪು ಬಣ್ಣದ ಮಡಕೆ ಕುಡಿಕೆ ಗಳು, ಕಬ್ಬಿಣದ ಆಯುಧೋಪಕರಣಗಳೂ ಮುಖ್ಯವಾಗಿವೆ. ಈ ಉತ್ಖನನ ಗಳಿಂದ ಆ ಪ್ರದೇಶದಲ್ಲಿ ಪೂರ್ವ ಮೆಸೋಲಿಥಿಕ್‍ನಿಂದ ಬೃಹತ್‍ಶಿಲಾ ಯುಗದ ಸಂಸ್ಕøತಿಯ ವರೆಗೆ ಜನಜೀವನ ಹೇಗೆ ಸಾಗಿತೆಂಬುದರ ವಿವರ ಪೂರ್ಣ ಚಿತ್ರಣ ಸಾಧ್ಯವಾಗಿದೆ.							
	(ಎಚ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ